ಮೃತಪಟ್ಟ ಫ್ಯಾನ್ಸ್ ಮನೆಯವರ ಕಷ್ಟಕ್ಕೆ ಮರುಗಿದ ರಾಕಿಂಗ್ ಸ್ಟಾರ್ ಯಶ್

ನಟ ಯಶ್ ತಮ್ಮ ನೆಚ್ಚಿನ ನಟನ ಜನ್ಮದಿನದಂದು ಶುಭಾಶಯ ಬ್ಯಾನರ್ ತಯಾರಿಸುವಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಂಗಿ ಗ್ರಾಮದಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಮೃತರನ್ನು ಹಣಮಂತ ಹರಿಜನ (21), ಮುರಳಿ ನಡವಿನಮನಿ (20) ಮತ್ತು ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋವಾದಲ್ಲಿದ್ದ ನಟ ಯಶ್ ಅಪಘಾತದ ಸುದ್ದಿ ತಿಳಿದು ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿಂದ ಕಾರಿನಲ್ಲಿ ಗದಗದ ಸುರಂಗಿ ಗ್ರಾಮಕ್ಕೆ ಆಗಮಿಸಿದರು. ಬಳಿಕ ಮೃತ ಅಭಿಮಾನಿಗಳ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಕ್ಕಳನ್ನು ಕಳೆದುಕೊಂಡು ಅಳುತ್ತಿರುವ ಕುಟುಂಬಸ್ಥರನ್ನು ನೋಡಿ ಯಶ್ ಭಾವುಕರಾದರು.

ಮೂವರು ಅಭಿಮಾನಿಗಳ ಮನೆಯಲ್ಲಿ ಪೋಷಕರು ಕಣ್ಣೀರಿಟ್ಟರು. ಪಾಲಕರು ತಮ್ಮ ಮಕ್ಕಳ ಬಗ್ಗೆ ದೊಡ್ಡ ಕನಸುಗಳನ್ನು ಹೊಂದಿದ್ದರು. ಆದರೆ, ದುರಂತದಲ್ಲಿ ಅಕಾಲಿಕ ಮರಣ ಹೊಂದಿದ ಮಕ್ಕಳನ್ನು ನೆನೆದು ಪಾಲಕರು ಆಕಾಶವೇ ಕಳಚಿ ಬಿದ್ದಂತೆ ಅಳಲು ತೋಡಿಕೊಂಡರು. ಇದನ್ನು ನೋಡಿದ ನಟ ಯಶ್ ಅಕ್ಷರಶಃ ಭಾವುಕರಾದರು. ಯಶ್ ಮುಖ ದುಃಖವಾಗಿತ್ತು. ಪೋಷಕರು ಹೇಳಿದ ಮಾತು ಕೇಳಿ ಅವರ ಕಣ್ಣಲ್ಲಿ ನೀರು ತುಂಬಿ ಭಾವುಕರಾದರು.

ನನ್ನ ಬಗ್ಗೆ ನನಗೆ ವಿಷಾದವಿದೆ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯಶ್, ನನಗೇ ನನ್ನ ಮೇಲೆ ನನಗೇ ಬೇಜಾರಾಗುತ್ತಿದೆ.ನಾವು ಎಂದಿಗೂ ಬ್ಯಾನರ್ ಹಾಕಲು ಇಷ್ಟಪಡುವುದಿಲ್ಲ. ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ಹೇಳಿದರೂ ಅಭಿಮಾನಿಗಳು ಅಸಮಾಧಾನಗೊಳ್ಳುತ್ತಾರೆ.

ಅಭಿಮಾನಿಗಳು ಖುಷಿಯಾಗಿದ್ದರೆ ನಮಗೂ ಖುಷಿ. ಇನ್ನು ಮುಂದೆ ಯಾರೂ ಬ್ಯಾನರ್ ಕಟ್ಟಬೇಡಿ ಎಂದು ನಟ ಯಶ್ ಅಭಿಮಾನಿಗಳಿಗೆ ಕರೆ ನೀಡಿದರು. ಅಲ್ಲದೆ, ಮೃತ ಅಭಿಮಾನಿಗಳ ಕುಟುಂಬಕ್ಕೆ ಬೇಕಾದ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರು.

ಸರ್ಕಾರದಿಂದ ಪರಿಹಾರ

ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಸರಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

Leave a Comment