ಇವತ್ತಿಂದ ಎಮ್ಮೆ ಮತ್ತು ಆಕಳ ಹಾಲು ಇಲ್ಲ, ಹಾಗಂತ ನಿನ್ನೆ ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ನಂದಿನಿ(KMF) ಒಂದು ಮಾಹಿತಿ ಕೊಡುತ್ತದೆ. ಏಕೆ ಅಂತ ಪ್ರಶ್ನಿಸಿದರೆ “ಹಾಲು ಸಾಲುತ್ತಿಲ್ಲ” ಅನ್ನುವ ಉತ್ತರ.
೧) ನಂದಿನಿಗೆ ಹೋಲಿಸಿದರೆ ಬೇರೆ ಹಾಲು ದುಬಾರಿ ಮತ್ತು ಗುಣಮಟ್ಟ ಕೂಡ ಕಮ್ಮಿ.
೨) ಕೆಎಂಎಫ್ ಒಂದು ಅಪಾಯಿಂಟ್ಮೆಂಟ್ ಸಾಕು ಯಾರಾದರೂ ಒಳಹೋಗಿ ನೋಡಬಹುದಾದ್ದರಿಂದ ಅಲ್ಲಿಯ ಶುದ್ಧತೆ, ಸ್ವಚ್ಛತೆ ಯಾರಿಗೂ ಕಾಣುವಂಥದ್ದೆ.
೩) ಕಲಬೆರಕೆ,ರಸಾಯನಿಕ ಮಿಶ್ರಣದ ಕಳಂಕ ನಂದಿನಿಗೆ ಅಂಟಿಲ್ಲ..
೪) ದೊಡ್ಮನೆ ಹಿರಿಯರಾದಿಯಾಗಿ ನಂದಿನಿಗೆ ನಯಾಪೈಸೆ ಸಂಭಾವನೆ ಇಲ್ಲದೆ ಬ್ರಾಂಡ್ ಅಂಬಾಸಿಡರ್ ಆಗಿ ಕೈ ಜೋಡಿಸಿದವರು. ಇದಾಗಿಯೂ ನಂದಿನಿ ಈಗ ಹಾಲಿನ ಕೊರತೆಯಲ್ಲಿದೆ.

ಹಾಲು ಉತ್ಪಾದನೆ ಪ್ರಮಾಣ ಕರ್ನಾಟಕದಲ್ಲಿ ಕಮ್ಮಿ ಇದೆಯಾ?
ಕೆಎಂಎಫ್ ಹಾಲು ಉತ್ಪಾದನೆಗಾಗಿ ಕೈಗೊಂಡ ಕ್ರಮ ಏನು?
ಹೈನೋದ್ಯಮಕ್ಕೆ ಕೆಎಂಎಫ್ ಕೊಡುಗೆ, ಪ್ರಯತ್ನ, ಕೈಗೊಂಡ ಕಾರ್ಯಕ್ರಮ ಏನು? ಹೈನೋದ್ಯಮಿಗಳ ಜೊತೆ ಕೆಎಂಎಫ್ ಎಷ್ಟು +ಹೇಗೆ ತೊಡಗಿಕೊಂಡಿದೆ?
ನಾನು ನೆರೆ ಪರಿಹಾರಾರ್ಥ ಬೆಳಗಾವಿ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಹೋದಾಗ, ಅಲ್ಲಿನ ಹೈನು, ಹಾಲು, ಹಾಲಿನ ಉತ್ಪನ್ನ ಎಲ್ಲ ಪಕ್ಕದ ರಾಜ್ಯಕ್ಕೆ ಮಾರಾಟವಾಗುವುದು ತಿಳಿದು ಬಂತು.ನಮ್ಮಲ್ಲಿ (ಉತ್ತರ ಕರ್ನಾಟಕಕ್ಕೆ) ಸುಮಾರು ೭ ರಿಂದ ೮ ಕಂಪನಿಯ ಹಾಲು ಅದೇ ಪಕ್ಕದ ರಾಜ್ಯದಿಂದ ಬರುತ್ತದೆ.
ಹಾಗಾದರೆ ನಮ್ಮಲ್ಲಿನ ಹಾಲು, ನಮ್ಮಲ್ಲೇ ಉಳಿಸಿಕೊಳ್ಳಲು ಯಾವ ನಿಟ್ಟಿನಲ್ಲಿ ಸೋತಿದ್ದೇವೆ?
ಬೇರೆಡೆಗೆ ಹೋಗುತ್ತಿರುವ ಸಂಪನ್ಮೂಲವನ್ನು ನಾವೇ ಖರಿಧಿಸಲು ಯಾಕಾಗುತ್ತಿಲ್ಲ?
ಇವೆಲ್ಲ ಸರ್ಕಾರಕ್ಕೆ, ಕೆಎಂಎಫ್ ಮಂಡಳಿಗೆ ಗೊತ್ತಿಲ್ಲವಾ?
ಹಾಲಿನ ಕೊರತೆ ಆಗಿದೆ ಅಂತ ಬೆಳಿಗ್ಗೆ ಹೇಳಿ, ಮಧ್ಯಾಹ್ನಕ್ಕೆ ಹಾಲು ಪೂರೈಸುವುದಿಲ್ಲ, ಅಂದರೆ ಇದು ಒಂದೇ ದಿನದಲ್ಲಿ ಉಂಟಾದ ಕ್ಷೋಭೆಯಾ? ಗೊತ್ತಿದ್ದರೂ ಸುಮ್ಮನಿದ್ದರಾ?

ನಾನು ಈ ಹಿಂದೆ ಒಂದು ನಂದಿನಿ ಪಾಯಿಂಟ್ ಓಪನ್ ಮಾಡಲು ಅದಕ್ಕೆ ಬೇಕಾದ ಎಲ್ಲ ಡಾಕ್ಯುಮೆಂಟ್ಸ್ ಕೊಟ್ಟು, ಕಟ್ಟಬೇಕಾದ ಶುಲ್ಕ ಕೂಡ ಕಟ್ಟಿದ್ದೆ, ಒಂದೆರೆಡು ದಿನ ನೋಡೊಣ ಹಾಲು ಎಷ್ಟು ಖರ್ಚಾಗತ್ತೆ ಅಂತ? ಆಮೇಲೆ ಪಾಯಿಂಟ್ ಮಾಡೋಣ ಅಂತ ಹೋದ ಆಸಾಮಿ, ನಮಗೆ ಪಾಯಿಂಟ್ ಅಧಿಕೃತವಾಗಿ ನೇಮಕ ಆಯ್ತಾ? ಇದುವರೆಗೂ ಹೇಳಿಲ್ಲ( ಒಂದು ವರ್ಷ ಆಗತ್ತೆ ಬಂತು), ನಾನು ಆ ಅಂಗಡಿ ಬಿಟ್ಟು ಬೇರೆ ಕಡೆ ಬಂದು, ನನ್ನವೇ ತಲೆನೋವುಗಳಲ್ಲಿ ಸಿಕ್ಕುಹಾಕಿಕೊಂಡದ್ದರಿಂದ ಅದನ್ನಲ್ಲಿಗೆ ಬಿಟ್ಟೆ.
ಮತ್ತು ಈ ವಾರದಲ್ಲಿ ನಂದಿನಿ ತುಪ್ಪ, ಚೀಸ್ ಕೂಡ ಬಂದ್ ಆಗುವ ಸಾಧ್ಯತೆ ಇದೆ.
ಅಥವ… ಎಲ್ಲವನ್ನೂ ಖಾಸಗಿಕರಣ ಮಾಡುತ್ತಿರುವ ಘನ ಆಡಳಿತ, ಈ ಹಿಂದೆ ಕೇಳಿ ಬಂದ ಉಹಾಪೋಹಕ್ಕೆ ಒಗ್ಗರಣೆಯಾಗಿ ಅಮೂಲ್ ಜೊತೆಗೆ ಕೆಎಂಎಫ್ ಕಲ್ಯಾಣಕ್ಕಾಗಿ ನೂರು ಸುಳ್ಳು ಹೇಳುತ್ತಿದೆಯಾ?
ಕೆಎಂಎಫ್ ನಂದಿನಿ ಈ ನೆಲದ ಹೆಮ್ಮೆ, ನನ್ನವ್ವನಂಥವರು ಸಾಕಿ ಪೋಷಿಸಿದ, ವಾತ್ಸಲ್ಯವನ್ನೇ ಹಿಂಡಿಕೊಟ್ಟ ತುಂಗೆ, ಗೌರಿ, ಗಂಗೆಯ ಕೆಚ್ಟಲ ಶುದ್ಧ ಅಮೃತ ಹೆಚ್ಚು ಹೇಳಲಾರೆ..
ನಂದಿನಿ ಜೊತೆ ನಿಂತದಕ್ಕೆ ಅಪ್ಪುವಿಗೊಂದು ಅಪ್ಪುಗೆಯ ಹಾರೈಕೆಯೊಂದಿಗೆ,ತಾವು ಹೋದ ಒಂದು ವರ್ಷದಲ್ಲಿ ಈ ಮಟ್ಟದ ಅಭಿವೃದ್ಧಿ ಸಾಧಿಸಿದ್ದಿವಿ ಅನ್ನುವ ಲೆಕ್ಕಪತ್ರ ಒಪ್ಪಿಸುತ್ತಿದ್ದೇವೆ, ನಮಸ್ಕಾರ.