ಶಿವಕುಮಾರ ಸ್ವಾಮೀಜಿ ಸಾಧನೆಗೆ ಭಾರತ ರತ್ನ ನೀಡಬೇಕಿದ್ದು, ಕೇಂದ್ರಕ್ಕೆ ಪತ್ರ ಬರೆದು ಒತ್ತಾಯ -ಸಿದ್ದರಾಮಯ್ಯ

Shivakumar Swamiji Bharat Ratna: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಗೌರವ ‘ಭಾರತ ರತ್ನ’ ನೀಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

 

 

ಭಾನುವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಶಿವಕುಮಾರ ಸ್ವಾಮೀಜಿ ಅವರ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಿವಕುಮಾರ ಸ್ವಾಮೀಜಿ ಅವರ ಸಾಧನೆಗೆ ಭಾರತ ರತ್ನ ನೀಡಬೇಕು, ಕೇಂದ್ರಕ್ಕೆ ಪತ್ರ ಬರೆದು ಒತ್ತಡ ತರಲಾಗುವುದು. ಅವರ ಹುಟ್ಟೂರಾದ ಮಾಗಡಿ ತಾಲೂಕಿನ ವೀರಾಪುರದಲ್ಲಿ ಸ್ವಾಮೀಜಿಯವರ ಮೂರ್ತಿ ನಿರ್ಮಾಣಕ್ಕೆ ಸರಕಾರದಿಂದ ನೆರವು ನೀಡಲಾಗುವುದು ಎಂದರು.

12ನೇ ಶತಮಾನದಲ್ಲೇ ಬಸವಾದಿ ಶಿವಶರಣರು ಸಮಾನ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರೂ ಇಂದಿಗೂ ಅಸಮಾನತೆ, ತಾರತಮ್ಯ ಮುಂದುವರಿದಿದೆ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯಿಲ್ಲದೆ ಅಸಮಾನತೆ ನಿರ್ಮೂಲನೆ ಸಾಧ್ಯವಿಲ್ಲ. ಇದೇ ಉದ್ದೇಶವನ್ನು ಇಟ್ಟುಕೊಂಡು ಸಂಕಷ್ಟದಲ್ಲಿರುವ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಐದು ಭರವಸೆಗಳನ್ನು ಜಾರಿಗೆ ತಂದಿದೆ. ಇದಕ್ಕಾಗಿ ಈ ವರ್ಷ ₹38 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಮುಂದಿನ ವರ್ಷ ₹68 ಸಾವಿರ ಕೋಟಿ ಖರ್ಚು ಮಾಡಲಾಗುವುದು ಎಂದರು.

ದಕ್ಷಿಣ ಕರ್ನಾಟಕ ಭಾಗವು ಆರ್ಥಿಕವಾಗಿ ಸಾಕಷ್ಟು ಬದಲಾವಣೆ ಕಂಡಿದ್ದರೆ, ಉತ್ತರ ಕರ್ನಾಟಕ ಭಾಗದ ಜನರು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ನಂಜುಂಡಪ್ಪ ವರದಿ ಜಾರಿ ಬಳಿಕವೂ ಅಸಮಾನತೆ ಕಾಣುತ್ತಿದೆ. ಅಂತಹವರ ನೆರವಿಗೆ ಸರಕಾರದ ಖಾತ್ರಿ ಯೋಜನೆಗಳು ಬರಲಿವೆ ಎಂದರು.

 

 

ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ‘ವರ್ಗ, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮಾಡಲಾಗಿದೆ. ಬಸವಣ್ಣ ಇಡೀ ವಿಶ್ವಕ್ಕೆ ಆದರ್ಶ ಪುರುಷ ಎಂದು ಬಣ್ಣಿಸಿದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರ ‘ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದು, ಯಾವುದೇ ಧರ್ಮವನ್ನು ಓಲೈಸಬೇಡಿ ಮತ್ತು ಎಲ್ಲರಿಗೂ ಸೂಕ್ತ ರೀತಿಯಲ್ಲಿ ಅನುದಾನ ಹಂಚಬೇಕು’ ಎಂದು ಒತ್ತಾಯಿಸಿದರು.

Leave a Comment