ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷಾವನ್ನು ಉತ್ತೇಜಿಸಲು ಪ್ರತಿ ವರ್ಷ ಫೆಬ್ರವರಿ 21 ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿ ನಾವು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ನಮ್ಮ ಮಾತೃಭಾಷೆಯನ್ನು ಆಚರಿಸುತ್ತೇವೆ. ಜಗತ್ತಿನಲ್ಲಿ 7,100ಕ್ಕೂ ಹೆಚ್ಚು ಭಾಷೆಗಳಿವೆ. ಭಾರತದಲ್ಲಿ ಪ್ರತಿ 15-20 ಕಿ.ಮೀ. ಗೆ ಭಾಷೆಗಳು ಬದಲಾಗುತ್ತವೆ.
ಮಾತೃಭಾಷಾ ದಿನಾಚರಣೆಯನ್ನು ಮೊದಲು ಬಾಂಗ್ಲಾದೇಶದಲ್ಲಿ ಪ್ರಾರಂಭಿಸಲಾಯಿತು. ಹಿಂದಿನ ಪೂರ್ವ ಬಂಗಾಳದಲ್ಲಿ, 1952 ರಲ್ಲಿ ಬಂಗಾಳಿ ಭಾಷಾ ಚಳುವಳಿ ಪ್ರಾರಂಭವಾದಾಗ, ಅಂತರರಾಷ್ಟ್ರೀಯ ಮಾತೃಭಾಷಾ ದಿನದತ್ತ ಮೊದಲ ಹೆಜ್ಜೆ ಇಡಲಾಯಿತು. ಅದರ ನಂತರ ಮೂರು ವರ್ಷಗಳ ನಂತರ, ಅಂದರೆ 1955 ರಲ್ಲಿ, ಬಾಂಗ್ಲಾದೇಶದಲ್ಲಿ ಭಾಷಾ ಚಳುವಳಿ ದಿನವನ್ನು ಆಚರಿಸಲಾಯಿತು.
1999 ರಲ್ಲಿ ಯುನೆಸ್ಕೋ ಫೆಬ್ರವರಿ 21 ಅನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಘೋಷಿಸಿತು. ಅದಾಗಿ ಒಂದು ವರ್ಷಕ್ಕೆ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಉದ್ಘಾಟನಾ ಸಮಾರಂಭ ನೆರೆವೇರಿತು.
ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಭಾಷೆ, ಸಂಸ್ಕೃತಿ ಮತ್ತು ಬಹುಭಾಷಾವನ್ನು ಉಳಿಸುವುದು.ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು. ಈ ಉದ್ದೇಶಕ್ಕಾಗಿ ಯುನೆಸ್ಕೋ ಈ ದಿನವನ್ನು ಆಚರಣೆಗೆ ತಂದಿದೆ. ಯುನೆಸ್ಕೋದ ಎಲ್ಲಾ ಸದಸ್ಯ ರಾಷ್ಟ್ರಗಳು ಮಾತೃಭಾಷಾ ದಿನವನ್ನು ಆಚರಿಸುತ್ತವೆ.