ಅಂಕೋಲಾ: ವಿವಾಹಿತ ಮಹಿಳೆಯನ್ನ ಮದುವೆಯಾಗುವುದಾಗಿ ದೈವನರ್ತಕನೊಬ್ಬ ಅಭಯ ನೀಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಂಬಾರಕೊಡ್ಲು ಗ್ರಾಮದಲ್ಲಿ ನಡೆದಿದೆ.
ಬೆಳಗಾವಿಯಿಂದ ಅಂಕೋಲಾಕ್ಕೆ ವೈಯಕ್ತಿಕ ಸಮಸ್ಯೆ ಪರಿಹಾರಕ್ಕೆಂದು ಮಹಿಳೆಯೊಬ್ಬರು ಅಂಬಾರಕೊಡ್ಲದ ಕಾಲಭೈರವ ದೇವರ ದರ್ಶನಕ್ಕೆ ಬಂದಿದ್ದರು. ಸನ್ನಿಧಿಯಲ್ಲಿದ್ದ ದೈವನರ್ತಕ ಅಲ್ಲಿಗೆ ಬಂದಿದ್ದ ಮಹಿಳೆಯ ಗಂಡ ಬಿಟ್ಟು ಹೋಗಿರುವ ಮಾಹಿತಿ ತಿಳಿದಿದ್ದ. ದೈವನರ್ತಕನಿಗೂ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದ್ದು, ಈ ವೇಳೆ ಮಹಿಳೆ ಸಮಸ್ಯೆಗೆ ಪರಿಹಾರವಾಗಿ ಮದುವೆಯಾಗುವ ಭರವಸೆ ನೀಡುವ ಮೂಲಕ ದೈವಪಾತ್ರಿ ಸ್ಥಳದಲ್ಲಿದ್ದವರಿಗೆಲ್ಲ ಅಚ್ಚರಿ ಮೂಡಿಸಿದ್ದಾನೆ.
‘ಈ ಬಾಲಕಿಗೆ ಈ ಬಾಲಕ ಮದುವೆಯಾಗುತ್ತಾನೆ’ ಎಂದು ಹೇಳಿಕೊಂಡ ದೈವನರ್ತಕ, ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಮಂಜುನಾಥೇಶ್ವರನ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಈಕೆಯ ಕುತ್ತಿಗೆಗೆ ತಾಳಿ ಬೀಳುತ್ತದೆ. ಇದು ಸತ್ಯ ಸತ್ಯ ಸತ್ಯ ಎಂದು ಕಾಂತಾರ ಚಿತ್ರದ ಸ್ಟೈಲ್‌ನಲ್ಲಿ ನುಡಿದಿದ್ದಾನೆ.
ದೈವಪಾತ್ರಿ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾಹಿತ ಮಹಿಳೆ ವರಿಸಲು ದೈವದ ಹೆಸರು ಬಳಸಿಕೊಂಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.