ಸ್ಯಾಂಡಲ್ ವುಡ್ ನಲ್ಲಿ ಪರಸ್ಪರ ನಟರು ನಟಿಯರ ನಡುವೆ ಆಗಾಗ್ಗೆ ಮನಸ್ತಾಪ ಆಗುವುದು ಸಹಜವೇ. ಇದೇನು ಹೊಸತಲ್ಲ. ಏಕೆಂದರೆ ಹಿಂದಿನಿಂದಲೂ ಆ ಪರಂಪರೆ ನಡೆದು ಬಂದಿದೆ. ಈ ಹಿಂದೆಯೂ ಕೂಡ ಡಾ. ರಾಜ್ ಮತ್ತು ವಿಷ್ಣು ನಡುವೆ ಸುಖಾಸುಮ್ಮನೆ ಗಾಸಿಪ್ ಎದ್ದು ಅವರ ದೋಸ್ತಿ ಮುರಿದು ಬಿದ್ದಿತ್ತು. ಇತ್ತೀಚೆಗೆ ನಟ ದರ್ಶನ್ ಮತ್ತು ಸುದೀಪ್ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಫೈಟ್ ನಡೆದಿತ್ತು.
ಅದೇನು ಗ್ರಹಚಾರವೋ ಅಥವಾ ಅದಾರ ಕಣ್ಣು ಬಿದ್ದಿತ್ತೋ ಗೊತ್ತಿಲ್ಲ. ಸ್ಯಾಂಡಲ್ ವುಡ್ನಲ್ಲಿ ದಚ್ಚು ಮತ್ತು ಕಿಚ್ಚನ ನಡುವೆ ಸದ್ದಿಲ್ಲದೇ ಕಿಚ್ಚು ಹೊತ್ತಿಕೊಂಡಿತ್ತು. ಒಬ್ಬರು ಬಾಕ್ಸ್ ಆಫೀಸ್ ಸುಲ್ತಾನ್ ಮತ್ತೊಬ್ಬ ಸ್ಯಾಂಡಲ್ ವುಡ್ ನ ಬಾದ್ ಶಾ ಎಂದೇ ಖ್ಯಾತಿ ಪಡೆದುಕೊಂಡಿರುವವರು. ಅಭಿಮಾನಿಗಳ ಪಾಲಿಗೆ ದರ್ಶನ್ ಯಜಮಾನ ಎನಿಸಿದರೆ ಸುದೀಪ್ ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ.
ಒಂದು ಕಾಲದಲ್ಲಿ ಇವರಿಬ್ಬರೂ ಬಹಳ ಕುಚ್ಚುಕ್ಕುಗಳಾಗಿದ್ದರು. ಇವರಲ್ಲಿದ್ದ ಸ್ನೇಹತ್ವಕ್ಕೆ ವಿಷ್ಣು ಮತ್ತು ಅಂಬಿ ಸ್ನೇಹಕ್ಕೆ ಹೋಲಿಸುತ್ತಿದ್ದರು. ಆದರೆ ವಿಧ ಅವರ ದೋಸ್ತಿಗೆ ವಿರುದ್ಧವಾಗಿ ಕೆಲಸ ಮಾಡಿತ್ತು. ಅದೇ ಕಾರಣಕ್ಕೆ ದೋಸ್ತಿಳು ದುಶ್ಮನ್ ಗಳಾಗಿ ಬದಲಾದರು. ಅದೆಲ್ಲಾ ಕಳೆದುಹೋದ ವಿಷಯವೂ ಹೌದು. ದರ್ಶನ್ ಮತ್ತು ಸುದೀಪ್ ನಡುವಿನ ಸ್ನೇಹ ಕಳಚಿಬಿದ್ದು,
ಕಿಚ್ಚ ಸುದೀಪ್ ನನ್ನ ಗೆಳೆಯನಲ್ಲಾ ಎಂದು ದರ್ಶನ್ ಟ್ವೀಟ್ ಮಾಡಿ ಬರೋಬ್ಬರಿ ನಾಲ್ಕು ವರ್ಷಗಳೇ ಕಳೆದಿವೆ. ಅಂದಿನಿಂದ ಶುರುವಾದ ಅವರ ನಡುವಿನ ಮುಸುಕಿನ ಗುದ್ದಾಟ ಇಂದಿಗೂ ಮುಗಿದಿಲ್ಲ. ಆದರೆ ಮೇಲು ನೋಟಕ್ಕೆ ಇವರಿಬ್ಬರೂ ದೋಸ್ತಿಗಳಂತೆ ಕಾಣಿಸಿದರೂ ಅವರ ನಡುವೆ ಈ ಮೊದಲು ಇದ್ದ ಸ್ನೇಹ ಮಾತ್ರ ಉಳಿದಿಲ್ಲ ಎಂಬುದು ಗಾಂಧಿನಗರದ ಜನರ ಮನದಾಳ.
ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ. ಅದು ಸ್ನೇಹವೇ ಆಗಲೀ, ಜಗಳವೇ ಆಗಲಿ. ಆದರೆ ಈ ದೋಸ್ತಿ ದಂಗಲ್ ಎಲ್ಲಿಯವರೆಗೆ ನಡೆಯುತ್ತದೆ? ಅಥವಾ ಇದಕ್ಕೆ ಯಾವಾಗ ಫುಲ್ ಸ್ಟಾಪ್ ಬೀಳಲಿದೆ ಎಂಬುದಕ್ಕೆ ಕಾಲವಷ್ಟೇ ಉತ್ತರ ನೀಡಬೇಕು. ಆದರೆ ಇವರು ದಂಗಲ್ ನಿಲ್ಲಿಸಿ ಮತ್ತೊಮ್ಮೆ ಮೊದಲಿನಂತಾಗಲಿ ಎಂಬುದು ಮಾತ್ರ ನಮ್ಮ ಹಾರೈಕೆ.