ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಮಳೆರಾಯನ ಕಣ್ಣಮುಚ್ಚಾಲೆ ಆಟ ಮುಂದುವರೆದಿದ್ದು, ಇದರ ನಡುವೆಯೇ ‘ಮಾನ್ಸೂನ್ ರಾಗ’ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೀತಿದೆ. 70-80ರ ಕಾಲಘಟ್ಟದಲ್ಲಿ ನಡೆಯುವ ಈ ಪ್ರೇಮಕಥೆ ಬಹಳ ಕುತೂಹಲ ಕೆರಳಿಸಿದೆ. ಚಿತ್ರದ ಕಲರ್‌ಫುಲ್ ಟೀಸರ್‌, ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಸಿನಿರಸಿಕರ ಗಮನ ಸೆಳೆದಿದೆ. ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಇಬ್ಬರೂ ವಿಭಿನ್ನ ಪಾತ್ರಗಳಲ್ಲಿ ಹೊಸ ಕಥೆ ಹೇಳಲು ಬರ್ತಿದ್ದಾರೆ. ಸ್ಯಾಂಪಲ್ಸ್ ನೋಡುತ್ತಿದ್ದರೆ ಇದೊಂದು ಫೀಲ್ ಗುಡ್ ಸಿನಿಮಾ ಅನ್ನಿಸ್ತಿದೆ.

 

 

ಸೆಪ್ಟೆಂಬರ್ 16ಕ್ಕೆ ‘ಮಾನ್ಸೂನ್ ರಾಗ’ ಸಿನಿಮಾ ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ. ‘ಪುಷ್ಪಕ ವಿಮಾನ’ ಚಿತ್ರ ಕಟ್ಟಿಕೊಟ್ಟಿದ್ದ ಅದೇ ತಂಡ ‘ಮಾನ್ಸೂನ್ ರಾಗ’ ಅನ್ನುವ ಮತ್ತೊಂದು ರಮಣೀಯ ಪ್ರೇಮಕಾವ್ಯವನ್ನು ಪ್ರೇಕ್ಷಕರ ಮುಂದೆ ತರ್ತಿದೆ. ಚಿತ್ರದಲ್ಲಿ ರಚಿತಾ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರೆ ಆಕೆಯನ್ನು ಪ್ರೀತಿಸುವ ಮುಗ್ಧ ಪ್ರೇಮಿಯಾಗಿ ಧನಂಜಯ್ ಮಿಂಚಿದ್ದಾರೆ. ಕ್ಲಾಸ್ ಹಾಗೂ ಮಾಸ್ ಎರಡೂ ಲುಕ್‌ನಲ್ಲಿ ಡಾಲಿ ಕಾಣಿಸಿಕೊಂಡಿದ್ದು, ಕ್ಲಾಸ್ ಅವತಾರದಲ್ಲೇ ಹೆಚ್ಚು ಹೊತ್ತು ಚಿತ್ರವನ್ನು ಆವರಿಸಿಕೊಂಡಿರುವಂತೆ ಕಾಣುತ್ತಿದೆ. ಇನ್ನು ವೇಶ್ಯೆಯ ಪಾತ್ರದಲ್ಲಿ ರಚ್ಚು ಸಖತ್ ಬೋಲ್ಡ್ ಆಗಿ ದರ್ಶನ ಕೊಟ್ಟಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಇಬ್ಬರು ಹಾರ ಹಿಡಿದು ಮದುವೆಗೆ ಸಿದ್ಧರಾಗಿರುವುದನ್ನು ನೋಡಬಹುದು.

 

 

‘ಪುಷ್ಪಕ ವಿಮಾನ’ ಸಿನಿಮಾ ನಿರ್ದೇಶಿಸಿ ಗೆದ್ದಿದ್ದ ನಿರ್ದೇಶಕ ಎಸ್‌. ರವೀಂದ್ರನಾಥ್ ಈ ಚತ್ರಕ್ಕೂ ಆಕ್ಷನ ಕಟ್ ಹೇಳಿದ್ದಾರೆ. ಅಚ್ಯುತ್‌ಕುಮಾರ್, ಸುಹಾಸಿನಿ, ಯಶಾ ಶಿವಕುಮಾರ್ ತಾರಾಗಣದಲ್ಲಿದ್ದಾರೆ. ವಿಶೇಷ ಅಂದರೆ ಅಚ್ಯುತ್ ಹಾಗೂ ಸುಹಾಸಿನಿ ಜೋಡಿಗೆ ಒಂದು ವಿಶೇಷ ಹಾಡು ಕೂಡ ಸಿಕ್ಕಿದೆ. ಗುರು ಕಶ್ಯಪ್ ಸಂಭಾಷಣೆ, ನವೀನ್ . ಜಿ ಪೂಜಾರಿ ಛಾಯಾಗ್ರಹಣ ‘ಮಾನ್ಸೂನ್ ರಾಗ’ ಚಿತ್ರಕ್ಕಿದೆ. ‘ಪುಷ್ಪಕ ವಿಮಾನ’ ಸಿನಿಮಾ ನಿರ್ಮಿಸಿದ್ದ ವಿಖ್ಯಾತ್ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಅನೂಪ್ ಸಿಳೀನ್ ಸಂಗೀತ ಈಗಾಗಲೇ ಭರವಸೆ ಮೂಡಿಸಿದೆ. ಭೂಗತಲೋಕದಲ್ಲಿ ಗುರ್ತಿಸಿಕೊಂಡಿರುವ ವ್ಯಕ್ತಿಯೊಬ್ಬನಿಗೆ ವೇಶ್ಯೆಯ ಜೊತೆ ಪ್ರೀತಿಯಾಗಿ ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ.

 

 

ರೆಟ್ರೋ ಸ್ಟೈಲ್ ಕಥೆಯನ್ನು ಸಿಕ್ಕಾಪಟ್ಟೆ ಕಲರ್‌ಫುಲ್‌ ಆಗಿ ಸೆರೆಹಿಡಿಯುವ ಪ್ರಯತ್ನ ನಡೆದಿದೆ. ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸಿದೆ. ‘ಮಾನ್ಸೂನ್ ರಾಗ’ ಚಿತ್ರದ ಬಹತೇಕ ಕಥೆ ಮಳೆಯಲ್ಲೇ ಸಾಗುತ್ತದೆ. ಹಾಗಾಗಿ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಸದ್ಯ ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಇಂತಹ ಹೊತ್ತಲ್ಲೇ ಸಿನಿಮಾ ರಿಲೀಸ್ ಮಾಡಲಾಗ್ತಿದೆ. ಈಗಾಗಲೇ ಸಿನಿಮಾ ಕಟೌಟ್‌ಗಳು ಸಿದ್ಧವಾಗಿದ್ದು, ಮತ್ತೆ ಪ್ರಮೋಷನ್‌ಗೆ ಆರಂಭಿಸಿದೆ ಚಿತ್ರತಂಡ.

 

 

ಈ ಸಿನಿಮಾದಲ್ಲಿ ಸೆಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಚಿತಾ ರಾಮ್ ಮೇಲೆ ಡಾಲಿಗೆ ಲವ್ ಆಗೋ ಸೂಚನೆ ಟ್ರೇಲರ್ ಮೂಲಕ ನಾವು ಗಮನಿಸಬಹುದು. ಟ್ರೇಲರ್ ನೋಡಿದ್ರೆ ಅದ್ಬುತ ಸ್ಟೋರಿ ಈ ಚಿತ್ರದಲ್ಲಿ ಇರೋದು ಪಕ್ಕಾ ಆಗಿದೆ. ಕೋವಿಡ್ ಸಮಯದಲ್ಲಿ ಈ ಸಿನಿಮಾ ಚಿತ್ರೀಕರಣ ಮಾಡುವುದು ಚಾಲೆಂಜಿಂಗ್ ಆಗಿತ್ತು ನಮಗೆ ಎಂದು ರಚ್ಚು ವಿವರಿಸಿದ್ದಾರೆ. ನಾವೆಲ್ಲ ಮಾಸ್ಕ್ ಹಾಕಿದ್ವಿ, ಶಾಟ್ ಟೈಂ ನಲ್ಲಿ ಹಾಕಿರಲಿಲ್ಲ ಎಂದಿದ್ದಾರೆ. ಮಳೆಯಲ್ಲಿ ಮಾಸ್ಕ್ ಮಾತ್ರ ಅಲ್ಲ, ಏನ್ ಹಾಕಿದ್ರು ಒದ್ದೆ ಆಗ್ತಾ ಇತ್ತು. ಬಟ್ಟೆ ಎಲ್ಲ ಕೂಡ ಒದ್ದೆಯಾಗುತ್ತಿತ್ತು ಎಂದಿದ್ದಾರೆ.

 

 

ಈ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ದುನಿಯಾ ವಿಜಯ್​ ಅವರು ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾಲಿ ಧನಂಜಯ್​ ಮತ್ತು ದುನಿಯಾ ವಿಜಯ್​ (Duniya Vijay) ಅವರು ಜೊತೆಯಾಗಿ ರಚಿತಾ ರಾಮ್​ ಗುಣಗಾನ ಮಾಡಿದ್ದಾರೆ. ‘ರಚಿತಾ ರಾಮ್​ ಬಡಬಡ ಅಂತ ಮಾತಾಡುತ್ತಾರೆ. ಅವರ ಎದೆಯಲ್ಲಿ ಮೋಸ ಇಲ್ಲ. ಅದಕ್ಕಾಗಿಯೇ ಇಷ್ಟು ವರ್ಷ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಸುಮಾರು ವರ್ಷ ಉಳಿದುಕೊಳ್ಳುತ್ತಾರೆ. ಅವರನ್ನು ನಾನು ತುಂಬ ಹತ್ತಿರದಿಂದ ನೋಡಿದ್ದೇನೆ. ಅವರ ಬಗ್ಗೆ ನನಗೆ ತುಂಬ ಗೌರವ ಇದೆ’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ.

 

 

ಈವೆಂಟ್‌ನಲ್ಲಿ ಮಾತನಾಡಿದ ನಟಿ ರಚಿತಾ ರಾಮ್ ದುನಿಯಾ ವಿಜಯ್ ಅವರನ್ನು ಮಚ್ಚಾ ಅಂತಾನೆ ಕರೆಯೋದು ಅಂತ ಹೇಳಿದ್ದಾರೆ. ‘ದುನಿಯಾ‌ ವಿಜಯ್ ಅವರನ್ನು ಸರ್ ಅಂತ ಎಂದು‌ ಕರೆದಿಲ್ಲ. ಬ್ರೋ ಮಚ್ಚಾ ಅಂತಲೇ ನಾನು ಕರೆಯೋದು’ ಎಂದು ಹೇಳಿದರು.

 

 

ಇದೇ ವೇಳೆ ರಚಿತಾ ಹಾಗೂ ಆ್ಯಂಕರ್ ಅನುಶ್ರೀ ಹಾಡೊಂದಕ್ಕೆ ಸಕತ್ ಸ್ಟೆಪ್ಸ್ ಹಾಕಿದರು. ನಟ ಧನಂಜಯ್ ರಚಿತಾ ಮತ್ತು ವಿಜಯ್ ಬಗ್ಗೆ ಮಾತನಾಡಿ, ‘ವಿಜಿ ಸರ್ ನಮ್ಮೆಲ್ಲರಿಗಿಂತ ದೊಡ್ಡ ಗ್ಯಾಂಗ್ ಸ್ಟರ್. ರಚಿತಾ ರಾಮ್ ಎಲ್ಲರಿಗಿಂತ ದೊಡ್ಡ ಡಾನ್’ ಎಂದು ಕಾಲೆಳೆದರು. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಮಾನ್ಸೂನ್ ರಾಗ ಸಿನಿಮಾ ಸೆಪ್ಟಂಬರ್ 16ರಂದು ತೆರೆಗೆ ಬರುತ್ತಿದ್ದು ಅಭಿಮಾನಿಗಳು ಕಾತುರರಾಗಿದ್ದಾರೆ.

 

Leave a comment

Your email address will not be published.