ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಬೆಂಕಿ ಒಂದು ಕಿಡಿ ಇರಲಿ ಅಥವಾ ಕೆನ್ನಾಲಗೆ ಆಗಲಿ, ಅದರಲ್ಲಿ ಹೊಗೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಸದ್ಯ ಪೊಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶರಣರ ವಿಷಯದಲ್ಲಿ ಇಡೀ ಹಿಂದೂ ಸಮಾಜ ಸಂತರ, ಸ್ವಾಮೀಜಿಗಳ ವಿಷಯದಲ್ಲಿ ಗೊಂದಲಕ್ಕೆ ಬಿದ್ದಿರುವುದು ಮಾತ್ರ ನಿಜ. ಅರಿಷಡ್ ವರ್ಗಗಳನ್ನು ಜಯಿಸಿದವರನ್ನು ನಾವು ಸಂತರ ಸ್ಥಾನದಲ್ಲಿ ಕುಳ್ಳಿರಿಸಿ ಪೂಜಿಸುತ್ತೇವೆ. ಅವರಿಗೆ ವಿಶೇಷ ಗೌರವಾದರಗಳು ಸಿಗುವಂತೆ ನೋಡಿಕೊಳ್ಳುತ್ತೇವೆ. ಅವರ ಕಾಲಿಗೆ ಬೀಳುತ್ತೇವೆ. ಅವರಿಗೆ ಪಾದಪೂಜೆ ಮಾಡುತ್ತೇವೆ. ಅದೆಲ್ಲ ಯಾಕೆ ಎಂದರೆ ಅವರು ಕಾಮವನ್ನು ಜಯಸಿದವರು ಎನ್ನುವ ಏಕೈಕ ಕಾರಣಕ್ಕೆ. ಕಾಮವನ್ನು ನಿಗ್ರಹಿಸುವುದು ಅಷ್ಟು ಸುಲಭವಲ್ಲ. ಅದು ಸಾಮಾನ್ಯರಿಗೆ ಸಾಧ್ಯವೂ ಅಲ್ಲ.

 

 

ದೇಹ ಹೊರಸೂಸುವ ವಾಂಛೆಗಳ ಲವಲಕ್ಷಣಗಳನ್ನು ತೋರ್ಪಡಿಸದೇ ಇಡೀ ಬದುಕನ್ನು ಕಳೆಯುವುದು ಎಂದರೆ ಅವರು ನಿಜಕ್ಕೂ ಪವಾಡ ಪುರುಷರೇ ಆಗಿರಬೇಕು. ಅದಕ್ಕಾಗಿ ಅವರಿಗೆ ವಿಶಿಷ್ಟ ಸ್ಥಾನ. ಅಂತಹ ಸ್ಥಾನದಲ್ಲಿ ಬುದ್ಧಿ ಬಂದ ಮೇಲೆ ಕೂರಲು ಒಪ್ಪುವವರು ಕಾಮದ ವಿಷಯ ಬಂದಾಗ ಸ್ಥಿತಪಜ್ಞರಾಗಬೇಕು. ಒಂದು ವೇಳೆ ಬಾಲ್ಯದಲ್ಲಿ ಅವರನ್ನು ಯತಿಯನ್ನಾಗಿ ಮಾಡಲಾಗಿದ್ದರೆ ಯೌವನ ಬಂದ ಮೇಲೆ ಕಾಮ ನಿಗ್ರಹ ಸಾಧ್ಯವಾಗದಿದ್ದರೆ ಆ ಪೀಠದಿಂದ ಗೌರವಪೂರ್ಣವಾಗಿ ಇಳಿದು ಹೋಗಬೇಕು. ಸುಬ್ರಹ್ಮಣ್ಯ ಶ್ರೀಗಳಾಗಿದ್ದವರು ತಮ್ಮ ಭಕ್ತೆಯೊಬ್ಬರ ಮೇಲೆ ಅನುರಕ್ತರಾದಾಗ ಅವರನ್ನು ವರಿಸಲು ಪೀಠವನ್ನೇ ತ್ಯಾಗ ಮಾಡಿದ್ದರು. ಈ ಮೂಲಕ ಪೀಠದ ಗೌರವವನ್ನು ಉಳಿಸಿದ್ದರು. ಇದು ನಿಜಕ್ಕೂ ಆಗಬೇಕಾಗಿರುವ ಕೆಲಸ. ಮುರುಘಾ ಶರಣರು ಒಂದು ಕಡೆ ಭಾಷಣದಲ್ಲಿ ಸಂತರ ಕಾಯಾ ಅಂದರೆ ದೇಹವನ್ನು ಕಾಪಾಡುವುದು ಎಂತಹ ಸವಾಲಿನ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತವರೇ ಈಗ ಈ ಜಾಲಕ್ಕೆ ಬಿದ್ದಿರುವುದು ನಿಜಕ್ಕೂ ದುರಂತ.

 

 

ಇನ್ನು ಚಿತ್ರದುರ್ಗದ ಸ್ವಾಮೀಜಿಯೊಬ್ಬರ ಪ್ರಕರಣ ತನಿಖೆಯ ಹಂತದಲ್ಲಿ ಇರುವಾಗಲೇ ಬೆಳಗಾವಿಯ ಮಠವೊಂದರ ಸ್ವಾಮೀಜಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಇಂತಹುದೇ ವಿಷಯ ತಾಳೆ ಹಾಕಿರುವುದು ಕೂಡ ಅವರ ಡೆತ್ ನೋಟಿನ ಮೂಲಕ ಪತ್ತೆಯಾಗಿದೆ. ಇಬ್ಬರು ಮಹಿಳೆಯರು ಫೋನಿನಲ್ಲಿ ಮಾತನಾಡುತ್ತಾ ನಮ್ಮ ಸ್ವಾಮಿ ಕೂಡ ಹಾಗೆನೆ ಎನ್ನುವ ಅರ್ಥದ ಮಾತುಗಳನ್ನು ಹೇಳಿರುವುದರಿಂದ ಘಾಸಿಗೊಂಡಿರುವ ಬೆಳಗಾವಿಯ ಸ್ವಾಮೀಜಿ ಮಠದ ಕೋಣೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

 

ಉಡುಪಿಯ ಹಿಂದಿನ ಶೀರೂರು ಸ್ವಾಮೀಜಿಯೊಬ್ಬರ ವಿಷಯದಲ್ಲಿಯೂ ಅವರಿಗೆ ಮಗು ಇದೆ ಮತ್ತು ಅದು ಮಠದಲ್ಲಿಯೇ ಇರುತ್ತದೆ ಎನ್ನುವ ವಿಷಯ ಚರ್ಚೆಯಲ್ಲಿತ್ತು. ಅದು ಅವರ ಕಿವಿಗೆ ಬಿದ್ದು ಅವರು ಅಷ್ಟಮಠದ ಆಗಿನ ಹಿರಿಯ ಸ್ವಾಮೀಜಿಯೊಬ್ಬರಿಗೂ ಹೀಗೆ ಮಕ್ಕಳಿವೆ ಎಂದು ಹೇಳಿದ್ದಾರೆ ಎನ್ನಲಾಗಿದ್ದ ಆಡಿಯೋ ಕೂಡ ವೈರಲ್ ಆಗಿತ್ತು. ಆ ಬಳಿಕ ಶೀರೂರು ಸ್ವಾಮಿಗಳು ಅನುಮಾನಾಸ್ಪದವಾಗಿ ತೀರಿಕೊಂಡಿದ್ದರು. ಅದರ ಬಳಿಕವೂ ಕೆಲವು ಕಡೆ ಸ್ವಾಮೀಜಿಗಳ ವಿಷಯದಲ್ಲಿ ಹೆಸರು ಹಾಳಾಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಂತ ಇವತ್ತಿಗೂ ಹಿಂದೂ ಸಮಾಜ ಸಂತರ ಬಗ್ಗೆ ಪೂಜ್ಯಭಾವನೆಯನ್ನು ಹೊಂದಿದೆ. ಎಷ್ಟೋ ಕಡೆ ಅಕ್ಷರ ದಾಸೋಹ, ಅನ್ನದಾಸೋಹ ಸಹಿತ ಮಠಗಳು ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿವೆ. ಆರೋಗ್ಯದ ವಿಷಯದಲ್ಲಿ ಅನೇಕ ಮಠಗಳು ಕಾಳಜಿಯನ್ನು ಹೊಂದಿ ಆಸ್ಪತ್ರೆ ಕಟ್ಟಿಸಿವೆ. ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿವೆ.

 

 

ಅಷ್ಟೇ ಅಲ್ಲದೆ ಸಾಮೂಹಿಕ ವಿವಾಹಗಳಿಂದ ಹಿಡಿದು ವಸ್ತ್ರದಾನದ ತನಕ ಸತ್ಕಾರ್ಯಗಳನ್ನು ಮಾಡುವುದರಲ್ಲಿ ಮಠಗಳ ಕೊಡುಗೆ ಮುಖ್ಯವಾಗಿದೆ. ಆದ್ದರಿಂದ ಕೆಲವು ಸ್ವಾಮೀಜಿಗಳು ಮಾಡಿದ ಅನೈತಿಕ ಕಾರ್ಯಗಳಿಂದ ಇಡೀ ಸಂತ ಸಮಾಜ ನೊಂದುಕೊಳ್ಳುವುದು ಬೇಡಾ. ಆದರೆ ಒಂದು ವೇಳೆ ಸತ್ಯ ಬೇರೆ ಸ್ವಾಮೀಜಿಗಳಿಗೆ ಗೊತ್ತಿದ್ದರೆ ಅಂತವರು ಬೆಂಬಲಿಸದೇ ದೂರ ನಿಲ್ಲುವುದು ಉತ್ತಮ. ಯಾಕೆಂದರೆ ಆತ್ಮಸಾಕ್ಷಿಯ ವಿರುದ್ಧ ಹೋಗಿ ಸಂತರು ಎನ್ನುವ ಕಾರಣಕ್ಕೆ ಬೆಂಬಲ ನೀಡಿದರೆ ಅದರಿಂದಲೂ ಮಾಡಿದವರ ಪಾಪ ಬೆಂಬಲಿಸಿದವರ ಖಾತೆಗೆ ಹೋಗುತ್ತದೆ.

 

 

ಶ್ರೀಗಳ ವಿರುದ್ಧ ದೂರು ನೀಡಿದ ಹೆಣ್ಣು ಮಕ್ಕಳನ್ನು ಅಭಿನಂದಿಸಲೇಬೇಕು. ಮೊದಲನೆಯದಾಗಿ ಮಠದಲ್ಲಿ ಮುಂದುವರೆಯಬಹುದಾಗಿದ್ದ ಲೈಂಗಿಕ ಪರಂಪರೆಗೆ ಬ್ರೇಕ್ ಹಾಕಿದ್ದಕ್ಕೆ, ಎರಡನೆಯದಾಗಿ ಮಠದೊಳಗಣ ನಡೆಯುತ್ತಿದ್ದ ವ್ಯಭಿಚಾರವನ್ನು ಬಟಾಬಯಲು ಮಾಡಿದ ಅವರ ಸಾಹಸ ಪ್ರವೃತ್ತಿಗೆ.. ಯಾಕಂದ್ರೆ ಬಹಿರಂಗವಾಗಿರುವುದು, ರಾಜ್ಯದ ಅತ್ಯಂತ ಪ್ರಭಾವಿ ಮಠಗಳಲ್ಲೊಂದಾದ ಚಿತ್ರದುರ್ಗ ಬ್ರಹನ್ಮಠದಲ್ಲಿ ಕಾವಿ ದಿರಿಸಿನೊಳನೆ ಅನೇಕ ವರ್ಷಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿತ್ತು ಎನ್ನಲಾದ “ಹಾದರ”.ಹಾಗೆಯೇ, ನಾಡಿನ ಜನತೆ ಎದುರು ಬೆತ್ತಲಾಗಿರುವುದು ವೈಚಾರಿಕತೆಯ ಕಟ್ಟರ್ ಪ್ರತಿಪಾದಕರಂತಿದ್ದ ಮುರುಘಾಶರಣರು.

 

 

ಚಿತ್ರದುರ್ಗದ ಬ್ರಹನ್ಮಠದ ಶ್ರೀ ಮುರುಘಾ ಶರಣರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ದಾಖಲಾಗಿರುವ ದೂರು “ಕಾವಿ” ವಲಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಬಾಯಿ ಬಿಟ್ಟರೆ ವೈಚಾರಿಕತೆ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುತ್ತಿದ್ದ ಆ ಶರಣ ಇವ್ರೇನಾ ಎಂದು ಮಠದ ಅಪಾರ ಭಕ್ತವೃಂದ ಮಾತನಾಡಿಕೊಳ್ಳುವಂತಾಗಿದೆ. ಮಕ್ಕಳನ್ನು ದತ್ತು ಪಡೆದು ಅವರನ್ನು ಸಾಕಿ ಸಲಹಿ ಅವರಿಗೊಂದು ಉಜ್ವಲ ಭವಿಷ್ಯ ನೀಡುವ ಮಠದ ಪರಂಪರೆನೇ ಈಗ ಪ್ರಶ್ನೆಗೀಡಾಗುತ್ತಿದೆ.ಬಾಲಕಿಯರು ನೀಡಿರುವ ದೂರು ಮಠದಲ್ಲಿ ಶ್ರೀಗಳ ಲೈಂಗಿಕ ಪರಂಪರೆಗೆ ದೊಡ್ಡ ಇತಿಹಾಸವಿದೆಯೇ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕವಾಗಿ ಸೃಷ್ಟಿಸಿದೆ.

 

 

ಸಚ್ಚಾರಿತ್ರ್ಯವನ್ನು ಹೊದ್ದು ಮಲಗಿದಂತೆ ಭಾಸವಾಗುತ್ತಿದ್ದ ಬ್ರಹನ್ಮಠದ ಆಂತರ್ಯದಲ್ಲಿ ನಡೆಯುತ್ತಿದ್ದದು ಹೆಣ್ಣು ಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ,…ಆಸೆ ಆಮಿಷಗಳ ಹೆಸರಲ್ಲಿ ಅವರ ಶೀಲಹರಣ,.. ಬಡತನ-ಅಸಹಾಯಕತೆಯ ದುರುಪಯೋಗ….ಹಣ ನೀಡಿ ಕಾಮದಾಸೆ ತೀರಿಸಿಕೊಳ್ಳುವ ಹಾದರದ ಕೃತ್ಯಗಳು ಎನ್ನುವುದು ಹೆಣ್ಣು ಮಕ್ಕಳು ಬಾಯ್ಬಿಟ್ಟಿರುವ ಸ್ಪೋಟಕ ಸಂಗತಿಗಳಿಂದ ಬಹಿರಂಗವಾಗಿದೆ.ಸಹಜವಾಗಿ ಇಂತದ್ದೊಂದು ಆರೋಪ ಕೇಳಿಬಂದಾಗ ಶ್ರೀಗಳ ಬೆನ್ನಿಗೆ ನಿಲ್ಲಬೇಕಿರುವ ಬಹುತೇಕ ಭಕ್ತರು, ಮುರುಘಾಶರಣರ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವರ ಬಂಧನವಾಗಬೇಕು.ಅವರ ಕರ್ಮ-ಕಾಮಕಾಂಡಗಳ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆನ್ನುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಹೆಣ್ಣು ಮಕ್ಕಳಲ್ಲದೆ ಗಂಡು ಮಕ್ಕಳೂ ಕೂಡ ಲೈಂಗಿಕ ಶೋಷಣೆಗೆ ಒಳಗಾಗಿದ್ದಾರಂತೆ.

 

 

ಚಿತ್ರದುರ್ಗದ ರಾಜಕಾರಣವನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದು ನಿಂತ ಶ್ರೀಗಳ ಬಗ್ಗೆ ಸಾರ್ವಜನಿಕ ವಾಗಿ ಅಪಾರ ಗೌರವ-ಆದರಗಳಿತ್ತು.ದಾರ್ಶನಿಕತೆ-ವೈಚಾರಿಕತೆ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ರಿಂದ ಸಹಜ ವಾಗೇ ಅವರ ಆದರ್ಶಗಳಿಗೆ ಜನ ಮಾರುಹೋಗುತ್ತಿದ್ದರು.ಆದರೆ ಅದರ ಹಿಂದೆಲ್ಲಾ ಒಂದು ಢೋಂ ಗಿತನ- ವ್ಯಾಘ್ರತನ-ಕಾಮಲಾಲಸೆ ಇತ್ತೆನ್ನುವುದು ಮೇಲ್ಕಂಡ ಪ್ರಕರಣದಿಂದ ಕಂಡುಬಂದಿ ರುವುದರಿಂದ ಶ್ರೀಗಳ ಪೀಠತ್ಯಾಗ-ಕಾವಿ ತೊರೆಯುವಿಕೆ ಹಾಗೂ ಮಠದ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳ ಸಮಗ್ರ ವಿಚಾರಣೆಯಾಗಬೇಕೆನ್ನುವ ಕೂಗು ಕೇಳಿಬರುತ್ತಿದೆ.

Leave a comment

Your email address will not be published.