ಹರೀಶ್ ರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ದೇಶಕ. 26 ಜುಲೈ 1976 ಬೆಂಗಳೂರಿನಲ್ಲಿ ಜನಿಸಿದ ಇವರು ಬಾಲ್ಯ ವಿದ್ಯಬ್ಯಾಸವೆಲ್ಲ ಮುಗಿಸಿದ್ದೆಲ್ಲಾ ಬೆಂಗಳೂರಿನಲ್ಲಿ. ಮೂರು ಜನ ಅಕ್ಕಂದಿಯರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ನಲ್ಲಿ ಎಂಎ ಪದವಿ ಪಡೆದಿದ್ದಾರೆ.

 

 

ಹರೀಶ್ ರಾಜ್ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಸಿನಿಜೀವನ ಆರಂಭಿಸಿದರು. ಹೊಸ ಚಿಗುರು ಹಳೆ ಬೇರು (1996) ಇವರು ನಟಿಸಿದ ಮೊದಲ ಸೀರಿಯಲ್. 1998 ರಲ್ಲಿ ದೋಣಿ ಸಾಗಲಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದರು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ದಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ.

 

 

 

2009 ರಲ್ಲಿ ಬಿಡುಗಡೆಗೊಂಡ ಕಲಾಕಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕೂಡ ಕಾಣಿಸಿಕೊಂಡರು. ತಮ್ಮ 25 ವರ್ಷಗಳ ಸಿನಿಜೀವನದಲ್ಲಿ ಕನ್ನಡದ ಬಹುತೇಕ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ. 2016 ರಲ್ಲಿ ತೆರೆಕಂಡ ಶ್ರೀ ಸತ್ಯನಾರಾಯಣ ಚಿತ್ರದಲ್ಲಿ 16 ಪಾತ್ರಗಳಲ್ಲಿ ನಟಿಸಿ ಒಂದೇ ಚಿತ್ರದಲ್ಲಿ ಅತಿ ಹೆಚ್ಚು ಪಾತ್ರಗಳಲ್ಲಿ ನಟಿಸಿದ ನಟ ಎಂದು ಲಿಮ್ಕಾ ದಾಖಲೆ ಬರೆದರು.

 

 

2014 ರಲ್ಲಿ ಶ್ರುತಿಲೋಕೇಶ್ ಅವರ ಜೊತೆಯಲ್ಲಿ ವಿವಾಹವಾಗುತ್ತಾರೆ. ದಂಪತಿಗೆ ಸಾನು ಎಂಬ ಒಬ್ಬ ಪುತ್ರಿಯಿದ್ದಾಳೆ. ಬಿಗ್ ಬಾಸ್ ಮೊದಲಿನ ಅವತರಿಣಿಕೆಗಳಲ್ಲಿ ಆಫರ್ ಬಂದಾಗ ನಿರಾಕರಿಸಿದ್ದ ಹರೀಶ್ ರಾಜ್ ಬಿಗ್ ಬಾಸ್ ಏಳನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಬಿಗ್ ಬಾಸ್ ಮನೆಯಲ್ಲಿ 107 ದಿನಗಳ ಕಾಲ ಮನರಂಜಿಸಿದ್ದ ಹರೀಶ್ ರಾಜ್ ಫಿನಾಲೆಯ ಕೊನೆಯ ವಾರದಲ್ಲಿ ಮಿಡ್-ವೀಕ್ ಎಲಿಮಿನೇಶನ್ ಮೂಲಕ ಹೊರಬಂದರು.

 

 

1997ರಲ್ಲಿ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯಾ ಅವರು ನಟಿಸಿದ್ದ ‘ದೋಣಿ ಸಾಗಲಿ’ ಚಿತ್ರದ ಮೂಲಕ ಹರೀಶ್ ರಾಜ್ ಅವರ ಸಿನಿಪಯಣ ಆರಂಭವಾಯಿತು. ಅದೇ ವರ್ಷ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ ‘ತಾಯಿ ಸಾಹೇಬ’ ಚಿತ್ರದಲ್ಲೂ ಹರೀಶ್ ರಾಜ್ ನಟಿಸಿದ್ದರು. ‘ಗಿರೀಶ್ ಕಾಸರವಳ್ಳಿ ಅವರ ‘ತಾಯಿ ಸಾಹೇಬ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅದರಲ್ಲಿ ಜಯಮಾಲಾ ಅವರ ಮಗನ ಪಾತ್ರವನ್ನು ನಾನು ಮಾಡಿದ್ದೆ. ಆ ಪಾತ್ರದಿಂದ ನನಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ನಂತರ ಗಿರೀಶ್ ಕಾಸರವಳ್ಳಿ ಅವರ ‘ದ್ವೀಪ’ ಮತ್ತು ‘ಕೂರ್ಮಾವತಾರ’ ಸಿನಿಮಾಗಳಲ್ಲೂ ನಟಿಸಿದೆ’ ಎನ್ನುತ್ತಾರೆ ಹರೀಶ್‌ ರಾಜ್.

 

 

ಫಣಿ ರಾಮಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ‘ದಂಡಪಿಂಡಗಳು’ ಧಾರಾವಾಹಿಯಲ್ಲಿ ಹರೀಶ್ ಮುಖ್ಯ ಪಾತ್ರ ಮಾಡಿದ್ದರು. ಆ ಧಾರಾವಾಹಿಯಲ್ಲಿ ಸುನೀಲ್ ಪುರಾಣಿಕ್ ಅವರು ಕೂಡ ಬಣ್ಣ ಹಚ್ಚಿದ್ದರು. ಆ ದಿನಗಳನ್ನು ನೆನಪು ಮಾಡಿಕೊಳ್ಳುವ ಹರೀಶ್ ರಾಜ್, ‘ನಾನು ಮತ್ತು ಸುನೀಲ್ ಪುರಾಣಿಕ್ ಅವರು ಫಣಿ ರಾಮಚಂದ್ರ ಅವರ ನಿರ್ದೇಶನದ ‘ದಂಡ ಪಿಂಡಗಳು’ ಧಾರಾವಾಹಿಯಲ್ಲಿ ಜೊತೆಗೆ ನಟಿಸಿದ್ದೆವು. ಇದೆಲ್ಲಾ ನೆನಪಿಸಿಕೊಂಡರೆ ಇಷ್ಟು ಬೇಗ 25 ವರ್ಷಗಳು ಕಳೆದು ಹೋಯಿತಾ ಎಂದು ಅನಿಸುತ್ತದೆ. ಈ 25 ವರ್ಷಗಳಲ್ಲಿ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ರಾಜೇಂದ್ರ ಸಿಂಗ್ ಬಾಬು ಅವರಂತಹ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ಬಣ್ಣ ಹಚ್ಚಿದ ಖುಷಿ ಇದೆ’ ಎನ್ನುತ್ತಾರೆ.

 

 

ನಟರಾಗಿ ಚಿತ್ರರಂಗಕ್ಕೆ ಬಂದ ಹರೀಶ್ ರಾಜ್ ಆನಂತರ ನಿರ್ದೇಶಕರೂ ಆದರು. ಈಚೆಗಷ್ಟೇ ಬಿಗ್ ಬಾಸ್ ರಿಯಾಲಿಟಿ ಶೋಗೂ ಹರೀಶ್ ರಾಜ್ ಹೋಗಿಬಂದರು. ‘ಬಿಗ್ ಬಾಸ್ ನನಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ನಾನು ಏನಾದರೂ ಈ ರಂಗದಲ್ಲಿ ಸಾಧನೆ ಮಾಡಿದ್ದೀನಿ ಅಂದರೆ ಅದಕ್ಕೆ ಕಾರಣ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಹಾಗೂ ಮಾಧ್ಯಮದವರು. ಇಡೀ ಚಿತ್ರರಂಗಕ್ಕೆ ನಾನು ಚಿರ ಋಣಿ’ ಎನ್ನುತ್ತಾರೆ ಹರೀಶ್ ರಾಜ್.

Leave a comment

Your email address will not be published.