ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರಿಗೆ ಚಿತ್ರದುರ್ಗ ಮುರುಘಾ ಮಠದಿಂದ ಮರಣೋತ್ತರವಾಗಿ 2021ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಮುರುಘಾರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ದಿ.ಪುನೀತ್ ಅವರ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪುರಸ್ಕಾರ ಸ್ವೀಕರಿಸಿದ್ದರು. ಬಸವಶ್ರೀ ಪ್ರಶಸ್ತಿ 5 ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿತ್ತು. ಮುರುಘಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದ್ದರು.

 

 

ಪ್ರಶಸ್ತಿ ಪ್ರದಾನ ಮಾಡಿದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ನಟ ಪುನೀತ್ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡುವ ಮೂಲಕ ಅವರ ಇಡೀ ಕುಟುಂಬಕ್ಕೆ ಮಧ್ಯ ಕರ್ನಾಟಕದಿಂದ ಗೌರವಿಸುವ ಕೆಲಸ ಮಾಡಲಾಗಿದೆ. ರಾಜಕುಮಾರ್ ಮುದ್ದಿನ ಮಗ ಪುನೀತ್. ಬೆಳ್ಳಿ ತೆರೆಯಲ್ಲಿ ನಟಿಸಿದ ಮಹಾನ್ ಪ್ರತಿಭಾವಂತ. ಅಭಿನಯ-ಅಭಿವ್ಯಕ್ತಿ-ಹಾಡುಗಾರಿಕೆಯಲ್ಲಿ ಅವರು ಪುನೀತ ಎಂದು ಬಣ್ಣಿಸಿದ್ದರು. ತಂದೆಯ ಸ್ಪೂರ್ತಿ ಇಟ್ಟುಕೊಂಡು ಆಕಾಶದೆತ್ತರಕ್ಕೆ ಬೆಳೆದವರು, ಇಂತಹ ಪ್ರತಿಭಾವಂತರನ್ನು ಪಡೆದ ಕನ್ನಡನಾಡು ಮಾನ್ಯ, ನಾವೆಲ್ಲರೂ ಧನ್ಯ ಎಂದಿದ್ದರು.

 

 

ಚಿತ್ರದುರ್ಗದ ಮುರುಘಾಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿರುವ ಅಪ್ಪು ಅಭಿಮಾನಿ ಸಂಘಗಳು ಮುರುಘಾ ಮಠದಿಂದ ನೀಡಿದ್ದ ಬಸವಶ್ರೀ ಪ್ರಶಸ್ತಿಯನ್ನು ವಾಪಾಸ್ ನೀಡಲು ಆಗ್ರಹಿಸಿದ್ದಾರೆ.

 

 

ಚಿತ್ರದುರ್ಗದ ಮುರುಘಾಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರು ಭಾಗಿಯಾಗಿರುವ ಭೀಕರ ಬೆಳವಣಿಗೆಗಳ ಮಾಧ್ಯಮ ವರದಿಗಳಿಂದ ತಿಳಿದು ಇಡೀ ಕರ್ನಾಟಕ ವಿಚಲಿತವಾಗಿದೆ ಅವರು ಈಗ ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ಯಾವುದೇ ಪದಗಳು ಸಿಗುತ್ತಿಲ್ಲ.

 

 

ಅಪ್ಪು ಅಭಿಮಾನಿ ಬಳಗ ಇಂತಹ ಘೋರ ಘಟನೆಗಳನ್ನು ಬೆಳಕಿಗೆ ತರುವಲ್ಲಿ ನೆರವಾದ ಮೈಸೂರು ಮೂಲದ ಎನ್‌ಜಿಒ ಒಡನಾಡಿ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ‌ ಸಾಮಾಜಿಕ ಅನಿಷ್ಠಗಳ ವಿರುದ್ಧ ದಶಕಗಳಿಂದ ಒಡನಾಡಿ ಸಂಸ್ಥೆ ಹೋರಾಟ ಮಾಡಿಕೊಂಡು ಬರುತ್ತಿದೆ ಎಂದಿದೆ. ಹಗರಣದ ತನಿಖೆಯನ್ನು ವೇಗವಾಗಿ ಮುಂದುವರೆಸುವಂತೆ ಮತ್ತು ಯಾವುದೇ ಒತ್ತಡಕ್ಕೆ ಮಣಿಯದೇ ತನಿಖೆ ಮಾಡಬೇಕು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಆಧಾರದ ಮೇಲೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

 

 

1997ರಿಂದ ಮುರುಘಾ ಮಠ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಹೆಸರಿನಲ್ಲಿ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ, ಶಬಾನಾ ಆಜ್ಮಿ, ದಲೈಲಾಮಾ, ಬಲ್ಲಾದೀರ್ ಗದ್ದರ್, ವೇಗದ ಓಟಗಾರ್ತಿ ಪಿ.ಟಿ ಉಷಾ, ನಟ ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಬಸವಶ್ರೀ ಪ್ರಶಸ್ತಿ ನೀಡಲಾಗಿದೆ.

Leave a comment

Your email address will not be published.