ರಾಜ್ಯ ಸರಕಾರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ 2022-23ನೇ ವರ್ಷದ ಬಜೆಟ್‌ನಲ್ಲಿ ಕೃಷಿ ಉತ್ಪನ್ನ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಬಳಸುವ ಕೃಷಿ ಯಂತ್ರಗಳಿಗೆ ಅಗತ್ಯವಿರುವ ಡೀಸೆಲ್‌ಗೆ ಸಹಾಯಧನ ನೀಡುವ ರೈತಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಇಂಧನಗಳ ಬೆಲೆ ಏರಿಕೆ, ದುಪ್ಪಟ್ಟಾದ ಯಂತ್ರದ ಬಾಡಿಗೆಯಿಂದ ಕೊಂಚ ಮಟ್ಟಿಗೆ ನೆರವಾಗಲು ಯೋಜನೆ ಅನುಕೂಲವಾಗಲಿದೆ. ಈ ಸಂಬಂಧ ಜಿಲ್ಲಾಮಟ್ಟದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ರೈತರಿಗೆ ಈ ಬಗ್ಗೆ ಅರಿವು ಮೂಡಿಸಿದರೂ, ರೈತರು ಈ ಯೋಜನೆ ಸೌಲಭ್ಯ ಪಡೆಯಲು ಮುಂದಾಗುತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಮುಕ್ತಾಯದ ಹಂತದಲ್ಲಿದ್ದು ರೈತರು ಯೋಜನೆ ಸೌಲಭ್ಯಕ್ಕೆ ಅಗತ್ಯ ಮಾಹಿತಿ ನೋಂದಣಿ ಮಾಡಬೇಕಿದೆ.

 

 

ಕೃಷಿ ಬಹುತೇಕ ಆಧುನಿಕತೆಗೆ ತಿರುಗಿಕೊಳ್ಳುತ್ತಿದೆ. ಇದರಿಂದ ಸಂಪೂರ್ಣ ಕೃಷಿ ಕಾರ್ಯದಲ್ಲಿ ಯಂತ್ರಗಳ ಬಳಕೆ ಮಾಡಲಾಗುತ್ತದೆ. ಕೃಷಿಯಲ್ಲಿ ರೈತರು ಟ್ರ್ಯಾಕ್ಟರ್‌, ಟಿಲ್ಲರ್‌, ರಾಶಿ ಯಂತ್ರಗಳನ್ನು ಬಳಸುತ್ತಾರೆ. ಇದಕ್ಕೆ ಅವಶ್ಯಕವಾದ ಡಿಸೇಲ್‌ಗಾಗಿ ಸರಕಾರ ರೈತರ ಪ್ರತಿ ಎಕರೆಗೆ 250 ರೂಪಾಯಿ ಸಹಾಯಧನ ನೀಡುತ್ತಿದೆ. ಇದು ಗರಿಷ್ಠ 5 ಎಕರೆವರೆಗೂ ನೀಡಲಿದ್ದು 1250 ರೂಪಾಯಿ ಸಹಾಯಧನ ಕೃಷಿ ಇಲಾಖೆಯಿಂದ ಸಿಗಲಿದೆ.

 

 

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ವಾರ್ಷಿಕ 10 ಸಾವಿರ ಸಹಾಯಧನವನ್ನು ಫ್ರೂಟ್‌ ಐಡಿ ಆಧಾರದಲ್ಲಿ ನೀಡಲಾಗುತ್ತದೆ. ಇದರಂತೆ ರೈತಶಕ್ತಿ ಯೋಜನೆ ಹಣವನ್ನು ಕೂಡ ನೇರವಾಗಿ ರೈತರ ಖಾತೆಗೆ ವರ್ಗಾವಣೆಯಾಗಲಿದೆ. ಫ್ರೂಟ್ಸ್‌ನಲ್ಲಿರುವ ರೈತರ ಸರ್ವೆ ನಂಬರ ಆಧಾರದಲ್ಲಿ ಡಿಸೇಲ್‌ ಸಹಾಯಧನ ನೀಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿನ ಒಟ್ಟು 4,24,171 ಸರ್ವೆ ನಂಬರ್‌ಗಳ ಪೈಕಿ ಕೇವಲ 2,58,360 ಮಾತ್ರ ಅಪ್ ಲೋಡ್ ಆಗಿದ್ದು 1,65,831 ಬಾಕಿ ಉಳಿದಿದೆ. ಇದರಿಂದ ರೈತರಿಗೆ ಅಪ್ ಲೋಡ್ ಮಾಡಿರುವ ಸರ್ವೆ ನಂಬರ್‌ಗೆ ಮಾತ್ರ ಹಣಬರಲಿದ್ದು ಉಳಿದ ಸರ್ವೆ ನಂಬರ್‌ಗಳಿಗೆ ಸಹಾಯಧನ ಬರುವುದಿಲ್ಲ. ಇದರಿಂದ ರೈತರು ಆದಷ್ಟು ಬೇಗ ಸಿಎಸ್‌ಸಿ ಸೆಂಟರ್‌ ನಲ್ಲಿ ಅಪ್ಲೋಡ್‌ ಮಾಡಬೇಕಾಗಿದೆ.

 

 

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಾಗಿ, ಮೆಕ್ಕೆಜೋಳ ಬೆಳೆಯಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಯಂತ್ರಗಳಿಗೆ ಬಳಸುವ ಇಂಧನ ದರ ರೈತರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಸರಕಾರ ಇಂಧನಕ್ಕೆ ನೆರವಾಗಲು ರೈತ ಶಕ್ತಿ ಯೋಜನೆ ಜಾರಿ ತಂದಿದೆ. ಈವರೆಗೆ ಜಿಲ್ಲೆಯ 1,79,000 ರೈತರ ಪೈಕಿ 1,49,000 ಸಾವಿರ ಫ್ರೂಟ್ಸ್‌ ಐಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನುಳಿದ ರೈತರು ಇದರಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ.

 

 

ಪ್ರಧಾನಮಂತ್ರಿ ಕಿಸಾನ್‌ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 90372 ಸಂಖ್ಯೆ ರೈತರು ಅರ್ಜಿ ಸಲ್ಲಿಸಿದ್ದು, ಇದರಲ್ಲಿ 82521 ರೈತರಲ್ಲಿ ಸಂಖ್ಯೆ ರೈತರು ಫಲಾನುಭವಿಗಳಾಗಿದ್ದಾರೆ. ಈವರೆಗೆ ಕೇಂದ್ರದ ವಂತಿಗೆ 132.88 ಕೋಟಿ ರೂ.ಹಾಗೂ ರಾಜ್ಯದ ವಂತಿಕೆ 58.45 ಕೋಟಿ ರೂ. ಒಟ್ಟಾರೆ ರೂ. 191.33 ಕೋಟಿ ರೂ. ರೈತರ ಖಾತೆಗೆ ನೇರವಾಗಿ ಪಾವತಿಯಾಗಿರುತ್ತದೆ. ಈವರೆಗೆ 82521 ಫಲಾನುಭವಿಗಳಲ್ಲಿ 59518 ಸಂಖ್ಯೆ ಫಲಾನುಭವಿಗಳ ಇ-ಕೆವೈಸಿ ಮಾಡಿಸಿಕೊಳ್ಳುವುದು ಬಾಕಿ ಇದೆ. ಆಗಸ್ಟ್‌-ನವೆಂಬರ್‌ ಅವಧಿಯ ಪಿಎಂ-ಕಿಸಾನ್‌ ಆರ್ಥಿಕ ನೆರವು ವರ್ಗಾವಣೆಗಾಗಿ ಎಲ್ಲಾ ಫಲಾನುಭವಿ ರೈತರು ಆ.15 ರೊಳಗಾಗಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.

 

 

ರೈತಶಕ್ತಿ ಯೋಜನೆಯಡಿಯಲ್ಲಿ ರೈತರಿಗೆ ಪ್ರತಿ ಎಕರೆಗೆ 250 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಇದಕ್ಕೆ ಜಿಲ್ಲೆಯ ಎಲ್ಲ ರೈತರು ತಮ್ಮ ಸರ್ವೆನಂಬರ್‌ / ಪ್ಲಾಟ್‌ಗಳನ್ನು ಫ್ರೂಟ್ಸ್‌ ಐಡಿಯಲ್ಲಿ ನೋಂದಣಿ ಮಾಡಿ ಯೋಜನೆ ಸೌಲಭ್ಯ ಪಡೆದುಕೊಳ್ಳಬೇಕಿದೆ.

Leave a comment

Your email address will not be published.